ಚೆಕಾಫ್, ಅಂತೋನ್ ಪಾವ್ಲೊವಿಚ್

1860-1904. ರಷ್ಯದ ಪ್ರಸಿದ್ಧ ಕತೆಗಾರ ಮತ್ತು ನಾಟಕಕಾರ. ಈತನ ಸಣ್ಣಕತೆಗಳು ಮತ್ತು ನಾಟಕಗಳು ವಿಶ್ವದಾದ್ಯಂತ ಜನಪ್ರಿಯತೆಗಳಿಸಿವೆ. ಈತ ತಗಾನ್‍ರಾಗ್ ಎಂಬಲ್ಲಿ ಬಡಕುಟುಂಬವೊಂದರಲ್ಲಿ ಜನಿಸಿದ. ಈತನ ತಾತ ಜೀತದಾಳಾಗಿ ಬಹಳ ವರ್ಷ ದುಡಿದು ವಿಮೋಚನೆ ಹೊಂದಿದವ. ತಂದೆ ಪುಟ್ಟ ಅಂಗಡಿಯ ಮಾಲೀಕನಾಗಿ ಸಂಸಾರದ ಹೊಣೆಯನ್ನು ನಿರ್ವಹಿಸುತ್ತಿದ್ದ. ಅಂಗಡಿಯ ವರಮಾನದಿಂದ ಸಂಸಾರದ ನಿರ್ವಹಣೆ ದುಸ್ಸಾಧ್ಯವಾದಾಗ ಚೆಕಾಫ್ ಮಕ್ಕಳಿಗೆ ಪಾಠ ಹೇಳಿಕೊಟ್ಟು ಹಣ ಸಂಪಾದಿಸಿ ಸಂಸಾರದ ನಿರ್ವಹಣೆಯಲ್ಲಿ ನೆರವಾಗುತ್ತಿದ್ದ. ಬಾಲ್ಯದ ದಿನಗಳು ತನಗೂ ತನ್ನ ಸೋದರರಿಗೂ ದುರ್ಭರವಾಗಿದ್ದವು; ತನ್ನ ಜೀವನದಲ್ಲಂತೂ ಬಾಲ್ಯದ ದಿನಗಳು ಇಲ್ಲವಾದವು ಎಂದು ತಾನೆ ಹೇಳಿಕೊಂಡಿದ್ದಾನೆ.

	ಚೆಕಾಫ್ ಗ್ರೀಕ್ ಶಾಲೆಯಲ್ಲಿ ತನ್ನ ಶಿಕ್ಷಣವನ್ನು ಆರಂಭಿಸಿದ. ಆದರೆ ಒಂದು ವರ್ಷ ಮುಗಿಯುವುದರೊಳಗಾಗಿ ಈತನ ತಂದೆ ಈತನನ್ನು ಸ್ಥಳೀಯ ಶಾಲೆಗೆ (ಗಿಮ್ನಾಜಿ) ಸೇರಿಸಿದ (1869). ಚೆಕಾಫನಿಗೆ ಹದಿನೇಳು ವರ್ಷಗಳು ನಡೆಯುತ್ತಿದ್ದಾಗ ಈತನ ತಂದೆ ಎಲ್ಲವನ್ನು ಕಳೆದುಕೊಂಡು ತುಂಬ ಹೀನಸ್ಥಿತಿಗೆ ಬಂದ ಇಡೀ ಸಂಸಾರ ತಗಾನ್‍ರಾಗ್ ಊರನ್ನು ಬಿಟ್ಟು ಮಾಸ್ಕೊಗೆ ಪ್ರಯಾಣ ಬೆಳೆಸಬೇಕಾಯಿತು (1876). ಮಾಸ್ಕೊದ ಓಣಿಯೊಂದರಲ್ಲಿ ಚೆಕಾಫ್‍ನ ತಂದೆ ಬಿಡಾರಹೂಡಿದ. ಆದರೆ ಚೆಕಾಫ್ ತನ್ನ ಶಿಕ್ಷಣ ಪೂರೈಸುವವರೆಗೂ ಒಬ್ಬಂಟಿಗನಾಗಿ ತಗಾನ್‍ರಾಗ್‍ನಲ್ಲಿರಬೇಕಾಯಿತು. ಈತನಿಗೆ ಸಹಾಯ ಮಾಡುವ ಸ್ಥಿತಿಯಲ್ಲಿ ತಂದೆತಾಯಿಗಳಿರಲಿಲ್ಲ. ತಂದೆಗೆ ಸರಿಯಾಗಿ ಕೆಲಸವಿಲ್ಲದಿದ್ದುದರಿಂದ ಎಷ್ಟೋ ವೇಳೆ ಇಡೀ ಸಂಸಾರ ಹಸಿವಿನಿಂದ ನರಳಬೇಕಾಗುತ್ತಿತ್ತು.

	ಚೆಕಾಫ್‍ನಿಗೆ ಚಿಕ್ಕಂದಿನಿಂದಲೂ ಬರೆಯುವ ಹವ್ಯಾಸ. ತಾನೂ ಅರೆಹೊಟ್ಟೆಯಿಂದ ಇದ್ದರೂ ತಂದೆತಾಯಿಗಳಿಗೆ, ಸೋದರರಿಗೆ ಹಾಸ್ಯಪೂರಿತ ಪತ್ರಗಳನ್ನು ಬರೆಯುತ್ತಿದ್ದ. ಸೋದರರಿಗಾಗಿ eóÁಯ್‍ಕ ಎಂಬ ಕೈಬರೆಹದ ಹಾಸ್ಯ ಪತ್ರಿಕೆಯನ್ನು ಕಳುಹಿಸುತ್ತಿದ್ದ. ಮಾಸ್ಕೊ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ಈತನ ಹಿರಿಯ ಅಣ್ಣ ಅಲೆಕ್ಸಾಂಡರನ ಪ್ರಭಾವ ಈತನ ಮೇಲೆ ಈ ಅವಧಿಯಲ್ಲಿ ಬಹುಮಟ್ಟಿಗೆ ಉಂಟಾಯಿತು. ರಷ್ಯದ ಮಧ್ಯಮವರ್ಗದ ಕುಟುಂಬಗಳಿಗೆ ಜೀವನ ದುಸ್ಸಹನೀಯವಾಗಿತ್ತು. ಈ ಪರಿಸ್ಥಿತಿ ಚೆಕಾಫನ ಮೇಲೆ ತುಂಬ ಪರಿಣಾಮ ಮಾಡಿತು. ಶಾಲಾ ಶಿಕ್ಷಣ ಪೂರೈಸಿದೊಡನೆಯೇ (1879) ಈತನಿಗೆ ಮಾಸ್ಕೊ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದಲ್ಲಿ ಪ್ರವೇಶ ದೊರಕಿತು. ವೈದ್ಯಕೀಯ ಶಿಕ್ಷಣ ತನ್ನ ಸಾಹಿತ್ಯಕ ಕೃತಿಗಳ ಮೇಲೆ ಪ್ರಭಾವ ಬೀರಿತೆಂದು ಚೆಕಾಫ್ ಹೇಳಿಕೊಂಡಿದ್ದಾನೆ. ವೈದ್ಯಕೀಯ ಶಿಕ್ಷಣದಲ್ಲಿ ತೊಡಗಿದ್ದಾಗಲೇ ಸ್ವಲ್ಪ ಕಾಲ ಈತ ಆಸ್ಪತ್ರೆಗಳಲ್ಲಿ ಕೆಲಸ ಮಾಡಬೇಕಾಯಿತು. ಮುಂದೆ ವಿಶ್ವವಿದ್ಯಾಲಯ ಶಿಕ್ಷಣವನ್ನು ಮುಗಿಸಿದೊಡನೆಯೇ (1884) ಚೆಕಾಫ್ ವೈದ್ಯವೃತ್ತಿಯನ್ನು ಬಿಟ್ಟು ಕೊಟ್ಟ. ಕೆಲಕಾಲ ಹಳ್ಳಿಗಳಿಗೆ ಹೋಗಿ ರೈತರಿಗೆ ಓದುಬರಹ ಕಲಿಸಿದ. ಹೀಗಾಗಿ ಜನ ಸಂಪರ್ಕ ನಿಕಟವಾಯಿತು.

	1881 ರಿಂದ 1887ರ ಅವಧಿಯಲ್ಲಿ ಈತ ಅಸಂಖ್ಯಾತ ಕೃತಿಗಳನ್ನು ರಚಿಸಿದ. 1885ರಲ್ಲಿ ಪೀಟರ್ಸ್‍ಬರ್ಗ್‍ನ ಪ್ರಸಿದ್ಧ ಪತ್ರಿಕೆ ಎನಿಸಿದ ನೋವಯ ವ್ರೇಮ್ಯದ (ಹೊಸಕಾಲ) ಸಂಪಾದಕ ಸವೋರಿನ್‍ನ ಪರಿಚಯವಾಯಿತು. ಆ ಪತ್ರಿಕೆಯ ಸಾಹಿತ್ಯಕ ಪುರವಣಿಗೆ ಈತ ಕಾಯಂ ಬರೆಹಗಾರನಾದ. ಇವರಿಬ್ಬರ ಸ್ನೇಹ ಗಾಢವಾಗಿ ಇಬ್ಬರೂ ಜೊತೆಯಲ್ಲೇ ಇಟಲಿ ದೇಶವನ್ನು ಸುತ್ತಿದರು. ಇವರಿಬ್ಬರ ನಡುವೆ ನಡೆದ ಪತ್ರವ್ಯವಹಾರ ಸಾಹಿತ್ಯದ ದೃಷ್ಟಿಯಿಂದ ಗಮನಾರ್ಹವಾದುದು. 1886ರಲ್ಲಿ ಈತ ತನ್ನ ಮೊದಲ ಕಥಾಸಂಕಲನವನ್ನೂ 1887ರಲ್ಲಿ ಇವಾನೊ ಎಂಬ ಮೊದಲ ನಾಟಕವನ್ನೂ ಪ್ರಕಟಿಸಿದ. ಈತ ಟಾಲ್ಸ್‍ಟಾಯ್‍ನ ಪ್ರಭಾವಕ್ಕೆ ಒಳಗಾಗಿದ್ದರೂ ಆತನ ಭೇಟಿಯಾದುದು 1895ರಲ್ಲಿ. ಅಪರಾಧಿಗಳ ಸ್ಥಿತಿಗತಿಗಳನ್ನರಿಯಲೋಸುಗ ಈಗ ಸಹಾಲಿನ್ ದ್ವೀಪದ ಪ್ರವಾಸವನ್ನು ಕೈಗೊಂಡ. ಈ ಪ್ರವಾಸದ ಫಲವಾಗಿ ಈತ ಸಹಾಲಿನ್ ದ್ವೀಪ ಎಂಬ ಕೃತಿಯನ್ನು ರಚಿಸಿದ. ಅಲ್ಲಿನ ದುಃಸ್ಥಿತಿಗೆ ದೇಶದ ಪ್ರತಿಯೊಬ್ಬ ಪ್ರಜೆಯೂ ಹೊಣೆಯೆಂದು ಅದರಲ್ಲಿ ಟೀಕಿಸಿದ. ಹಾಗಾಗಿ ಅಪರಾಧಿಗಳ ಸ್ಥಿತಿಗತಿಯಲ್ಲಿ ಸುಧಾರಣೆಗಳಾದವು. 1901ರಲ್ಲಿ ಈತ ವೋಲ್ಗಾ ಲಿಯೊನಾರ್ಡೋ ನೀಪರ್ ಎಂಬಾಕೆಯನ್ನು ವಿವಾಹವಾದ.

	ಚೆಕಾಫ್ ಕ್ಷಯರೋಗ ಪೀಡಿತನಾಗಿದ್ದರಿಂದ 1892ರಲ್ಲಿ ಮಾಸ್ಕೊದಿಂದ 60 ಕಿ.ಮೀ. ದೂರವಿದ್ದ ಮೇಲಿಹವ ಎಂಬ ಹಳ್ಳಿಗೆ ಬಂದು ಅಲ್ಲಿ 6 ವರ್ಷಗಳ ಕಾಲ ವಾಸವಾಗಿದ್ದ. ಈ ಅವಧಿಯಲ್ಲಿ ಈತನ ಸೃಜನಾತ್ಮಕ ಸಾಹಿತ್ಯ ಸಿದ್ಧಿಯ ನೆಲೆಯನ್ನು ಮುಟ್ಟಿತೆಂದು ಹೇಳಬಹುದು. ಈತನ ಆರೋಗ್ಯ ದಿನದಿನಕ್ಕೂ ಕೆಡುತ್ತಾ ಹೋದಾಗ ವಿಶ್ರಾಂತಿಗಾಗಿ ಕ್ರಿಮ್‍ನಲ್ಲಿರುವ ಯಾಲ್ತಾ ಎಂಬ ನಗರಕ್ಕೆ ಬಂದ (1892). ಅಲ್ಲಿ ಈತನಿಗೆ ಗಾರ್ಕಿಯ ಸ್ನೇಹ ಲಭಿಸಿತು. ರಷ್ಯದಲ್ಲಿ ಇಂದಿಗೂ ಚೆಕಾಫ್, ಗಾರ್ಕಿ, ಟಾಲ್ಸ್‍ಟಾಯ್ ಈ ಮೂವರನ್ನು ರಷ್ಯದ ಸಾಹಿತ್ಯತ್ರಯರೆಂದು ಗಣಿಸಲಾಗಿದೆ.

	1900ರಲ್ಲಿ ಈತ ರಷ್ಯನ್ ಅಕಾಡೆಮಿ ಆಫ್ ಸೈನ್ಸ್ (ಸಾಹಿತ್ಯ ವಿಭಾಗ) ಸಂಸ್ಥೆಯ ಗೌರವಸದಸ್ಯನಾಗಿ ಚುನಾಯಿತನಾದ. ಆದರೆ eóÁರ್ ದೊರೆಯ ಆದೇಶದ ಮೇರೆಗೆ ಗಾರ್ಕಿಯ ಆಯ್ಕೆಯನ್ನು ರದ್ದುಗೊಳಿಸಿದ್ದರಿಂದ ಈತ ರಾಜೀನಾಮೆ ನೀಡಿದ.

	ಈತನಿಗೆ ಉಕ್ರೇನಿಯನ್ ಸಾಹಿತ್ಯದ ಪರಿಚಯವಿತ್ತು. ಈತನ ಅಜ್ಜಿ ಉಕ್ರೇನಿಯನ್ನಳು. ಚಿಕ್ಕಂದಿನಲ್ಲಿ ಅಜ್ಜಿಯಿಂದ ಉಕ್ರೇನಿಯನ್ ಹಾಡುಗಳನ್ನೂ ಕತೆಗಳನ್ನೂ ಕೇಳಿದ್ದ. ಉಕ್ರೇನ್‍ನಲ್ಲಿ ಹರಿಯುವ ಹರೋಲ್ ನದಿಯ ದಂಡೆಯಲ್ಲಿ ವಾಸಿಸಬೇಕೆಂದು ಎಷ್ಟೋ ಬಾರಿ ಈತ ಕನಸು ಕಂಡಿದ್ದುಂಟು. ಉಕ್ರೇನಿಯನ್ನರ ಸರಳತೆ, ಸಜ್ಜನಿಕೆ, ಹರಿತವಾದ ಬುದ್ಧಿಶಕ್ತಿ ಇವೇ ಮೊದಲಾದ ಸದ್ಗುಣಗಳಿಗೆ ಮಾರು ಹೋಗಿ ಈತ ತನ್ನಲ್ಲೂ ಆ ಗುಣಗಳನ್ನು ಅಳವಡಿಸಿಕೊಂಡಿದ್ದ, ವಿದ್ಯಾರ್ಥಿ ದೆಸೆಯಿಂದಲೂ ನಾಟಕರಂಗದ ಬಗ್ಗೆ ಈತನಿಗೆ ಆಸಕ್ತಿ: ಉಕ್ರೇನಿಯನ್ ಜನಜೀವನವನ್ನು ಆಧರಿಸಿ ಒಂದು ನಾಟಕವನ್ನು ಬರೆಯಬೇಕೆಂಬ ಅಭಿಲಾಷೆ; ಆದರೆ ಅದು ಸಾಧ್ಯವಾಗದೆ ಹೋಯಿತು. ಆದರೆ ಈತನ ಜೀವಿತಕಾಲದಲ್ಲೇ ಈತನ ಕೃತಿಗಳು ಉಕ್ರೇನಿಯನ್ ಭಾಷೆಗೆ ಅನುವಾದಗೊಂಡವು. ಇವಾನ್ ಫ್ರಾಂಕೊ, ಎಂ. ಕೊತ್ಸ್ಯುಬೀನ್‍ಸ್ಕಿ ಮತ್ತಿತರರು ಈತನ ಕೃತಿಗಳನ್ನು ಅನುವಾದಿಸಿದ್ದಾರೆ.

	ಈತನ ನಾಟಕಗಳಲ್ಲಿ ವೀಷ್ ನ್ಯೋವಿ ಸಾದ್ (ಚೆರಿ ಹಣ್ಣಿನ ತೋಟ), ಜಾಜ್ಯಾವಾನ್ಯಾ (ವಾನ್ಯಾ ಚಿಕ್ಕಪ್ಪ), ಜಾಯಕ್ (ಕಡಲ ಕಾಗೆ), ತ್ರ್ಯೋಹ್ ಸ್ಯೋಸ್ತ್ರಿ (ಮೂವರು ಸಹೋದರಿಯರು), ಇವನೋ ಮುಖ್ಯವಾದುವು, ಚೆರಿಹಣ್ಣಿನ ತೋಟವಂತೂ ಜಗತ್ಪ್ರಸಿದ್ಧವಾಗಿದೆ.									(ಎಚ್.ಎಸ್.ಎಚ್.)

	ಜಮೀನ್ದಾರ ವರ್ಗಕ್ಕೆ ಸೇರಿದ ಓರ್ವ ಮಹಿಳೆ ಮತ್ತು ಅವಳ ಸಹೋದರನ ಕತೆಯನ್ನು ಚೆರಿ ತೋಟ ನಾಟಕದಲ್ಲಿ ಕಾಣಬಹುದು. ವ್ಯಕ್ತಿಗಳ ಆಸೆ ಕನಸುಗಳನ್ನು ಲಕ್ಷಿಸದೆ ಸಾಗುವ ಜಗತ್ತಿಗೆ ಹೊಂದಿಕೊಳ್ಳಲಾರದ ವ್ಯಕ್ತಿಗಳ ಆಸೆ ಭರವಸೆಗಳ ದುರಂತ ನಾಶ ಈ ಕೃತಿಯ ವಸ್ತು. ಚೆರಿತೋಟ ಈ ಆಸೆ ಭರವಸೆಗಳ ಪ್ರತೀಕ. ನಿರೂಪಣೆಯ ಸೌಮ್ಯತೆ ನಾಟಕದ ಪರಿಣಾಮವನ್ನು ಹೆಚ್ಚಿಸಿದೆ.

	ಕಷ್ತಾಂಕ ಎಂಬುದು ಸರ್ಕಸ್ಸಿನಲ್ಲಿ ಕೆಲಸ ಮಾಡುವ ಒಂದು ನಾಯಿಯ ಕತೆ. ನಿರೂಪಣೆ ಅದ್ಭುತವಾದುದು. ಇದು ಎಳೆಯ ಹೃದಯಗಳನ್ನು ಸೂರೆಗೊಳ್ಳುವ ಅತ್ಯಂತ ಯಶಸ್ವಿ ಕತೆ. ಈತನ ಕತೆಗಳಲ್ಲಿ ಮುಖ್ಯವಾಗಿ ಪ್ರತಿ ವ್ಯಕ್ತಿಯ ಅಂತರ್ಯದ ಒಂಟಿತನ, ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದರ ಮತ್ತು ಒಬ್ಬರು ಮತ್ತೊಬ್ಬರಿಗೆ ತಮ್ಮ ಆಂತರ್ಯವನ್ನು ವ್ಯಕ್ತಪಡಿಸುವುದರ ಅಸಾಧ್ಯತೆ ಇವು ಚಿತ್ರಿತವಾಗಿವೆ. ಇದರಿಂದ ಚೆಕಾಫ್‍ನ ಕತೆಗಳ ಕ್ರಿಯೆ ವಿಷಾದ, ಬೇಸರ, ನಿಸ್ಸಹಾಯಕತೆಯ ಅರಿವು-ಇವು ಬೆರೆತ ವಾತಾವರಣದಲ್ಲಿ ಸಾಗುತ್ತದೆ. 

	ಈತ ತನ್ನದೇ ಆದ ವಿಶಿಷ್ಟ ಶೈಲಿಯನ್ನು ನಿರ್ಮಿಸಿಕೊಂಡ. `ಬೇಸರದ ಕತೆ `ಸಾಹಿತ್ಯದ ಪ್ರಾಧ್ಯಾಪಕ ಮೊದಲಾದವು ಸುಪ್ರಸಿದ್ಧ ಕತೆಗಳು. `ವಾರ್ಡ್ ನಂ.6' ಪ್ರತಿಮೆಯ ಬಳಕೆಯಲ್ಲಿ ಅದ್ಭುತ ಸಾಧನೆ.

	ಈತ ತುಘ್ರ್ಯನೆಫ್ ಮತ್ತು ಆಸ್ಟ್ರೌಸ್ಕಿ ಇವರುಗಳ ಪ್ರಯೋಗಗಳನ್ನು ಬೆಳೆಸಿದ. ಈತನ ನಾಟಕಗಳಲ್ಲಿ ಘಟನೆಗಳು ನಡೆಯುವಂತೆ ಭಾಸವಾದರೂ ವಾಸ್ತವವಾಗಿ ಕ್ರಿಯೆ ಮುಂದುವರೆದಿರುವುದಿಲ್ಲ. ಸಣ್ಣ ಪುಟ್ಟ ಸಂಗತಿಗಳು ಮತ್ತು ವಿವರಗಳನ್ನು ಬಳಸಿಕೊಂಡು ನಿರಾಸೆಯ ವಾತಾವರಣವನ್ನು ಸೃಷ್ಟಿಸುವ ಈತನ ಕೌಶಲ ಅವನು ಕರಣೀಯವಾದುದು. ಆಳವಾದ ಅನುಕಂಪದಿಂದ ಕೂಡಿದ ಪಾತ್ರನಿರೂಪಣೆ, ಪ್ರತಿಮಾವಿಧಾನದ ಬಳಕೆ, ವಿಶಿಷ್ಟವಾತಾವರಣದ ಸೃಷ್ಟಿ-ಇವು ಈತನ ನಾಟಕಗಳ ವೈಶಿಷ್ಟ್ಯ. ಇವು ರಂಗಭೂಮಿಯ ಮೇಲೂ ಬಹಳ ಯಶಸ್ವಿಯಾಗಿವೆ.		
		
	ಪಾಶ್ಚಾತ್ಯ ಜಗತ್ತಿನಲ್ಲಿ ಹತ್ತೊಂಬತ್ತನೆಯ ಶತಮಾನದ ಶ್ರೇಷ್ಠ ನಾಟಕಕಾರರಲ್ಲಿ ಒಬ್ಬ. ತಾನು ನಾಟಕವನ್ನು ಹೇಗೆ ಕಲ್ಪಿಸಿಕೊಳ್ಳುತ್ತೇನೆ ಎನ್ನುವುದನ್ನು ಅವನು ಹೀಗೆ ವಿವರಿಸಿದ್ದಾನೆ. ನಾಟಕ ಹೇಗಿರಬೇಕೆಂದರೆ ಜನರು ಬಂದು ಹೋಗಬೇಕು, ಊಟಮಾಡಬೇಕು, ಹವೆಯ ವಿಷಯ ಮಾತನಾಡಬೇಕು, ಇಸ್ಪೀಟ್ ಆಡಬೇಕು, ಆದರೆ ಇದೆಲ್ಲವನ್ನು ನಾಟಕಕಾರ ಬಯಸುತ್ತಾನೆ ಎಂದು ಮಾಡಬಾರದು, ನಿಜ ಜೀವನದಲ್ಲಿ ಆಗುವುದು ಇದೇ ಎನ್ನುವ ಕಾವ್ಯಕ್ಕಾಗಿ ಮಾಡಬೇಕು. ರಂಗಭೂಮಿಯ ಮೇಲಿನ ಬದುಕು, ವಾಸ್ತವ ಬದುಕಿನಂತೆಯೇ ಇರಬೇಕು, ಅಲ್ಲಿ ಕಾಣುವ ಜನರೂ ನಿಜ ಜೀವನದಲ್ಲಿ ಇರುವಂತೆಯೂ ಇರಬೇಕು. ಆದರೆ ತೀರ ಸಾಮಾನ್ಯವೆಂದು ಕಾಣುವ, ಅಮುಖವೆಂದು ಕಾಣುವ ಈ ಕ್ರಿಯೆಗಳು ನಡೆಯುತ್ತಿರುವಾಗಲೇ ಪಾತ್ರಗಳ ಬದುಕಿನ ದಿಕ್ಕುಗಳೇ ಬದಲಾಗುತ್ತಿವೆ, ಹೃದಯಗಳು ಒಡೆಯುತ್ತವೆ. ರಂಗಭೂಮಿಯ ಮೇಲಿನ ಕ್ರಿಯೆ ಬದುಕಿನ ಏರಿಳಿತಗಳನ್ನೂ ಸಾತತ್ವವನ್ನೂ ಅನುಭವಕ್ಕೆ ತಂದುಕೊಡಬೇಕು ಎಂದು ಇವನ ಅಭಿಪ್ರಾಯ. ಇವನ ನಾಟಕಗಳನ್ನು "ನಗೆ ಮತ್ತು ಉತ್ಪ್ರೇಕ್ಷೆಗಳಿಲ್ಲದ ಕಾಮಿಡಿ, ಎದೆ ಬಿಗಿಯುವುದು ಮತ್ತು ದುಷ್ಟತನಗಳಿಲ್ಲದ ಟ್ರಾಜಿಡಿ" ಎಂದು ವರ್ಣಿಸಿದೆ. (ಎಂದರೆ ಎದೆ ಬಡಿಯುವುದು ರಂಗಭೂಮಿಯ ಮೇಲಿನ ಕ್ರಿಯೆಯ ಭಾಗವಲ್ಲ). ಇವನ ನಾಟಕಗಳ ಕೇಂದ್ರದಲ್ಲಿ ಒಬ್ಬ ನಾಯಕ ಅಥವಾ ನಾಯಕಿ ಇರುವುದಿಲ್ಲ. ಒಂದು ಗುಂಪು ಇರುತ್ತದೆ. ನಾಟಕದಲ್ಲಿ ಕಥಾವಸ್ತು ಬೆಳೆಯುತ್ತದೆ ಎನ್ನುವುದಕ್ಕಿಂತ ಒಂದು ಸನ್ನಿವೇಶ ಅನಾವರಣವಾಗುತ್ತ ಹೋಗುತ್ತದೆ ಎನ್ನಬಹುದು. ಕಾಮಿಡಿ ಮತ್ತು ವಿಷಾದಗಳ ಅಸಿಧಾರಾ ಸಮತೋಲನವನ್ನು ಇವನ ನಾಟಕಗಳಲ್ಲಿ ಕಾಣಬಹುದು.			
										  ಪರಿಷ್ಕರಣೆ
							 		  ಎಲ್.ಎಸ್.ಎಸ್.ಶೇಷಗಿರಿರಾವ್

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ